ಪ್ಯಾಲಿಯೊಸ್ಪಾಂಡೈಲಸ್ 	-	
ಡಿವೋನಿಯನ್ ಕಾಲದಲ್ಲಿ ಜೀವಿಸಿದ್ದ ಒಂದು ತೆರನ ಮೀನು. ಈಗ ಪಳೆಯುಳಿಕೆ ರೂಪದಲ್ಲಿ ಮಾತ್ರ ಪರಿಚಿತ. ಅಸ್ಥಿರಜ್ಜುಗಳುಳ್ಳ ಮೀನುಗಳ ಅಂದರೆ ಕಾಂಡ್ರಿಕ್ತೀಯೀಸ್ ವರ್ಗಕ್ಕೆ ಸೇರಿದ ಇದು ಸ್ಕಾಟ್‍ಲೆಂಡಿನ ಡಿವೋನಿಯನ್ ಸ್ತರಗಳಲ್ಲಿ ಕಾಣಸಿಕ್ಕಿದೆ. ಆಕಾರದಲ್ಲಿ ಇತರ ಪ್ರಾಚೀನ ಪಳೆಯುಳಿಕೆ ಮೀನುಗಳ ಮಾದರಿಗಿಂತ ಇದು ಭಿನ್ನವಾಗಿದೆ. ಇದರ ದೇಹದಲ್ಲಿ ಯಾವುದೇ ರೀತಿಯ ಚರ್ಮೀಯ ಕವಚವಿಲ್ಲ. ಬದಲು ಚಿಕ್ಕ ಚಿಕ್ಕ ಎಲುಬಿನಂಥ ಫಲಕಗಳುಂಟು. ಇದರ ನಡುಕಟ್ಟು ಸಿಕ್ಕಿಲ್ಲವಾದರೂ ಅದಕ್ಕೆ ಸಂಬಂಧಿಸಿದ ಎಲುಬಿನ ಚೂರುಗಳು ಸಿಕ್ಕಿರುವುದರಿಂದ ಈ ಮೀನಿಗೆ ಈಜು ರೆಕ್ಕೆಗಳಿದ್ದವೆಂದು ಹೇಳಬಹುದು. ಇದಕ್ಕೆ ಚೆನ್ನಾಗಿ ರೂಪಗೊಂಡ ಬಾಲದ ಈಜುರೆಕ್ಕೆಯೂ ಇತ್ತು
. 
ಬೆನ್ನು ಮೂಳೆಯ ಬಹುಭಾಗ ಅಸ್ಥಿರಜ್ಜಿನಿಂದ ರಚಿತವಾಗಿತ್ತಾದ್ದರಿಂದ ಇದರ ಅವಶೇಷಗಳು ಸಿಕ್ಕಿಲ್ಲ. ಮಿದುಳು ಕವಚದ ಮುಂಭಾಗದಲ್ಲಿ ಕೆಲವು ಪ್ರಕ್ಷೇಪಣಗಳಿದ್ದು ಇವು ಮೂತಿಯ ಜೊತೆಗೆ ಸೇರಿಕೊಂಡಿವೆ. ಇದೇ ನಾಸಿಕದ ಭಾಗ ಎನ್ನಲಾಗಿದೆ. ತಲೆಬುರುಡಯ ತಳಭಾಗದಲ್ಲಿ ಕೆಲವು ಜೋಡಿ ಎಲುಬುಗಳಿದ್ದವು. ಈ ಎಲುಬುಗಳಿಗೆ ಸಮಾನವಾದ ಭಾಗಗಳನ್ನು ಈಗಿನ ಮೀನುಗಳಲ್ಲಿ ಹುಡುಕುವುದು. ಅಸಾಧ್ಯವಾದರೂ ಬಹುಶಃ ಇವು ದವಡೆಯ ಮತ್ತು ಕಿವಿರು ಕಮಾನುಗಳ ಮಾರ್ಪಾಡು ಎಂದು ಹೇಳಬಹುದು.

ಬೇರೆ ಜಾತಿಯ ಮೀನುಗಳಿಗೂ ಪ್ಯಾಲಿಯೊಸ್ಪಾಂಡೈಲಸಿಗೂ ಇರಬಹುದಾದ ಸಂಬಂಧದ ಬಗ್ಗೆ ಸಾಕಷ್ಟು ವಿವಾದವಿದೆ. ಇದು ಬೇರಾವುದೋ ಪ್ರಾಣಿಯ ಲಾರ್ವ ಎಂಬ ವಾದವೂ ಇದೆ. ಆದರೆ, ಯಾವುದೇ ಭ್ರೂಣದಲ್ಲೋ ಬೆಳವಣಿಗೆಯ ಅಷ್ಟು ಪ್ರಾಚೀನ ಹಂತದಲ್ಲೋ ಬೆನ್ನುಮೂಳೆ ಇದೆ ಎನ್ನುವ ವಿಚಾರ ಕಲ್ಪನಾತೀತ. ಇನ್ನೊಂದು ವಾದದ ಪ್ರಕಾರ ಇದು ದವಡೆ ರಹಿತ ಮೀನುಗಳ ಗುಂಪಿಗೆ ಸೇರಿದೆ. ಆದರೆ, ತಲೆಬುರುಡೆಯ ಕೆಳಭಾಗದ ಮೂಳೆಗಳು ಮತ್ತು ನಡುಕಟ್ಟುಗಳು ಈ ವಾದದ ವಿರೋಧಕ್ಕೆ ಸಾಕಷ್ಟು ಪುಷ್ಟಿಯೀಯುವುವು. ಪ್ಲಾಕೋಡರ್ಮ್ ಗುಂಪಿಗೆ ಸೇರುವ ಈ ಪ್ರಾಣಿ ವಿಕಾಸದ ಕೊನೆಯ ಹಂತದಲ್ಲಿ ತನ್ನ ಹೊರಕವಚವನ್ನು ಪೂರ್ತಿ ಕಳೆದುಕೊಂಡಿರಬೇಕು ಎಂಬ ವಾದ ಮನ್ನಣೆ ಗಳಿಸಿದೆ. 
									(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ